ಮಗಳ ಮೇಲೆ ಅತ್ಯಾಚಾರ ಎಸಗಿದ ಕಾಮುಕ ತಂದೆಗೆ ಜೀವತಾವಧಿ ಶಿಕ್ಷೆ
ಉಡುಪಿ: ಮಗಳ ಮೇಲೆ ಅತ್ಯಾಚಾರ ಎಸಗಿದ ಕಾಮುಕ ತಂದೆಗೆ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಪೋಕ್ಸೊ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎರ್ಮಾಳ್ ಕಲ್ಪನಾ ಅವರು ಜೀವತಾವಧಿ ಶಿಕ್ಷೆ ಹಾಗೂ ರೂ. 20,000 ದಂಡ ವಿಧಿಸಿದ್ದಾರೆ.
2020ರ ಮೇನಲ್ಲಿ 41 ವರ್ಷದ ತಂದೆ ತನ್ನ 14 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದ. ಬಾಲಕಿಯ ತಾಯಿ ಹಾಗೂ ಸೋದರ ಮನೆಯಲ್ಲಿ ಇದ್ದ ಸಂದರ್ಭ ತಂದೆ ಪೈಶಾಚಿಕ ಕೃತ್ಯ ಎಸಗಿದ್ದ. ಬಳಿಕ ಎರಡನೇ ಬಾರಿಯೂ ಅತ್ಯಾಚಾರ ಎಸಗಿ, ವಿಷಯ ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದ. ಬಾಲಕಿಯು ಪಕ್ಕದ ಮನೆಯವರ ಸಹಕಾರದಿಂದ ತಾಯಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಳು. ಬಳಿಕ, ತಾಯಿ ಮಹಿಳಾ ಠಾಣೆಗೆ ದೂರು ನೀಡಿದ್ದು, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿ ತಂದೆಯನ್ನು ಬಂಧಿಸಲಾಗಿತ್ತು.
ಪ್ರಕರಣದಲ್ಲಿ 23 ಸಾಕ್ಷಿಗಳ ಪೈಕಿ 11 ಮಂದಿಯ ವಿಚಾರಣೆ ನಡೆದಿತ್ತು. ಸಂತ್ರಸ್ತ ಬಾಲಕಿ, ತಾಯಿ ಹಾಗೂ ನೆರೆಮನೆಯವರು ನುಡಿದ ಸಾಕ್ಷ್ಯ ಅಭಿಯೋಜನೆಗೆ ಪೂರಕವಾಗಿದ್ದರಿಂದ ಬಾಲಕಿಯ ತಂದೆಯನ್ನು ಅಪರಾಧಿ ಎಂದು ತೀರ್ಮಾನಿಸಿದ ನ್ಯಾಯಾಧೀಶರು ಜೀವಿತಾವಧಿ ಶಿಕ್ಷೆ ವಿಧಿಸಿದ್ದಾರೆ. ಸಂತ್ರಸ್ತ ಬಾಲಕಿಗೆ ಸರ್ಕಾರ ರೂ. 5 ಲಕ್ಷ ಪರಿಹಾರ ನೀಡಲೂ ಆದೇಶಿಸಿದ್ದಾರೆ.
Comments
Post a Comment