ಮಸೀದಿಗಳ ಮೇಲಿನ ಧ್ವನಿವರ್ದಕ ಕಡಿತದ ಬಗ್ಗೆ ಯಾವುದೇ ಅಧೀಕೃತ ಆದೇಶ ಹೊರಡಿಸಿಲ್ಲ- ಸಚಿವೆ ಶಶಿಕಲಾ ಜೊಲ್ಲೆ,
ವಿಜಯಪುರ:-ಮಸೀದಿಗಳ ಮೇಲಿನ ಧ್ವನಿವರ್ಧಕಗಳ ಶಬ್ದವನ್ನು ಕಡಿಮೆಗೊಳಿಸುವ ಅಥವಾ ಅವುಗಳನ್ನು ತೆಗೆದು ಹಾಕುವಂತೆ ಇಲಾಖೆಯಿಂದ ಯಾವುದೇ ರೀತಿ ಅಧಿಕೃತ ಆದೇಶವನ್ನು ಹೊರಡಿಸಿಲ್ಲ ಎಂದು ಮುಜರಾಯಿ, ಹಜ್ ಹಾಗೂ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಕೋರ್ ಕಮಿಟಿ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮಸೀದಿಗಳ ಮೇಲಿನ ಧ್ವನಿವರ್ಧಕಗಳಿಗೆ ಸಂಬಂಧಿಸಿದಂತೆ ಯಾವುದೇ ತಪ್ಪು ಗ್ರಹಿಕೆಗೆ ಅವಕಾಶ ನೀಡಬೇಡಿ ಎಂದು ಮನವಿ ಮಾಡಿಕೊಂಡರು.
ಧ್ವನಿವರ್ಧಕಗಳ ಶಬ್ದದ ಪ್ರಮಾಣ ಎಷ್ಟಿರಬೇಕು ಎನ್ನುವುದರ ಬಗ್ಗೆ ಈಗಾಗಲೇ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಸದ್ಯಕ್ಕೆ ಈಗ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ನೀಡಲಾಗಿದೆ. ಆದರೆ ನಮ್ಮ ಇಲಾಖೆಯಿಂದ ಯಾವುದೇ ರೀತಿ ನೋಟಿಸ್ ಜಾರಿಗೊಳಿಸಿಲ್ಲ ಅಥವಾ ಆದೇಶವನ್ನು ಹೊರಡಿಸಿಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟವಾಗಿ ಹೇಳಿದರು.
ಇದೇ ವೇಳೆ ಆಜಾನ್ ಶಬ್ದವನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯಿಂದ ನೋಟಿಸ್ ಕೊಟ್ಟಿರುವ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲ ಎಂದು ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

Comments
Post a Comment