ಆಪತ್ತಿನ ಕ್ಷಣದಲ್ಲಿ ಜೀವ ಉಳಿಸಿದ ಕೊಪ್ಪ ಅಗ್ನಿಶಾಮಕ ದಳ – ಸಮಯಪ್ರಜ್ಞೆಯ ಕಾರ್ಯಾಚರಣೆಗೆ ಸಾರ್ವಜನಿಕರ ಮೆಚ್ಚು
ಆಪತ್ತಿನ ಕ್ಷಣದಲ್ಲಿ ಜೀವ ಉಳಿಸಿದ ಕೊಪ್ಪ ಅಗ್ನಿಶಾಮಕ ದಳ – ಸಮಯಪ್ರಜ್ಞೆಯ ಕಾರ್ಯಾಚರಣೆಗೆ ಸಾರ್ವಜನಿಕರ ಮೆಚ್ಚುಗೆ,
ಕೊಪ್ಪ, ಜುಲೈ 15:
ಕೊಪ್ಪ ತಾಲೂಕಿನ ಕವಡೆಕಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಸುಮಾರು 60 ಅಡಿ ಆಳದ ಬಾವಿಯನ್ನು ಸ್ವಚ್ಛಗೊಳಿಸುವ ವೇಳೆ, ವಿಶ್ವನಾಥ್ (30) ಎಂಬ ಯುವಕ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ಘಟನೆ ನಡೆದಿದೆ.
ಘಟನೆಯ ಮಾಹಿತಿ ದೊರೆಯುತ್ತಿದ್ದಂತೆಯೇ ಕೊಪ್ಪ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಕ್ಷಿಪ್ರವಾಗಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಠಾಣಾಧಿಕಾರಿ ಸುಂದರ್ ಬಿ ಅವರ ನೇತೃತ್ವದಲ್ಲಿ ಕೌಶಿಕ್ ಕೆ.ಎಸ್., ಗುರುನಾಥ್ ಲಮಾಣಿ, ಮನೋಹರ್ ರಾಠೋಡ್ ಹಾಗೂ ಲಿಂಗರಾಜು ಎಸ್.ವಿ. ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
ಈ ವೇಳೆ ಅಗ್ನಿಶಾಮಕ ಸಿಬ್ಬಂದಿ ಗುರುನಾಥ್ ಅವರು ಸುರಕ್ಷತಾ ಹಾರ್ನೆಸ್ ಬೆಲ್ಟ್ ಧರಿಸಿ ಬಾವಿಯೊಳಗೆ ಇಳಿದು, ಅಪಾರ ಧೈರ್ಯ ಹಾಗೂ ಸಮಯಪ್ರಜ್ಞೆಯಿಂದ ವಿಶ್ವನಾಥ್ ಅವರನ್ನು ಜೀವಂತವಾಗಿ ರಕ್ಷಿಸಿ ಮೇಲಕ್ಕೆ ಕರೆತಂದರು. ಬಳಿಕ ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಆಪತ್ತಿನ ಸಂದರ್ಭದಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಮತ್ತೊಬ್ಬರ ಜೀವ ಉಳಿಸಿದ ಕೊಪ್ಪ ಅಗ್ನಿಶಾಮಕ ದಳದ ಈ ಕಾರ್ಯ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಇಂತಹ ನಿಸ್ವಾರ್ಥ ಸೇವೆ ಸಮಾಜಕ್ಕೆ ಮಾದರಿಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿಯ ಧೈರ್ಯ, ಕರ್ತವ್ಯನಿಷ್ಠೆ ಹಾಗೂ ಮಾನವೀಯತೆಗೆ ಎಲ್ಲೆಡೆಯಿಂದ ಅಭಿನಂದನೆಗಳು ವ್ಯಕ್ತವಾಗಿವೆ.
ಆಪತ್ತಿನ ಸಮಯದಲ್ಲಿ ಮೊದಲು ನೆನಪಾಗುವ ಹೆಸರು – ಅಗ್ನಿಶಾಮಕ ದಳ. ಅವರ ಸಮಯೋಚಿತ ಕಾರ್ಯವೇ ಮತ್ತೊಂದು ಜೀವವನ್ನು ಉಳಿಸಿದೆ.
🖋️ ರೆಹಮಾನ್ ಸಣ್ಣಕೇರೆ
ವಾರ್ತಾ ಸಾರಥಿ ಡಿಜಿಟಲ್


Comments
Post a Comment