ಸರ್ಕಾರಿ ಶಾಲೆಗಳಲ್ಲಿ ಸಭೆ ನಡೆಸಿ ವಸ್ತು ವಿತರಣೆ ಮಾಡುವುದು ಸರ್ಕಾರದ ಆದೇಶಕ್ಕೆ ವಿರುದ್ಧ: ಓಣಿತೋಟ ರತ್ನಾಕರ್
ಸರ್ಕಾರಿ ಶಾಲೆಗಳಲ್ಲಿ ಸಭೆ ನಡೆಸಿ ವಸ್ತು ವಿತರಣೆ ಮಾಡುವುದು ಸರ್ಕಾರದ ಆದೇಶಕ್ಕೆ ವಿರುದ್ಧ: ಓಣಿತೋಟ ರತ್ನಾಕರ್ ಕೊಪ್ಪ, ಜು. 31: ಸರ್ಕಾರಿ ಶಾಲೆಗಳ ಮಕ್ಕಳಿಗೆ ಪುಸ್ತಕಗಳು, ಬಟ್ಟೆ ಹಾಗೂ ಇತರೆ ಅಗತ್ಯ ವಸ್ತುಗಳನ್ನು ದಾನವಾಗಿ ನೀಡುವುದು ಉತ್ತಮ ಸಂಸ್ಕೃತಿಯಾಗಿದ್ದು, ಅದನ್ನು ಯಾರೂ ವಿರೋಧಿಸುವುದಿಲ್ಲ. ಆದರೆ, ಮತಗಳ ಉದ್ದೇಶದಿಂದ ಮಕ್ಕಳ ಪೋಷಕರನ್ನು ಶಾಲೆಗೆ ಕರೆಸಿ ಸಭೆ-ಸಮಾರಂಭಗಳನ್ನು ಆಯೋಜಿಸಿ ವಸ್ತುಗಳನ್ನು ವಿತರಿಸುವುದು ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಮುಖಂಡ ಓಣಿತೋಟ ರತ್ನಾಕರ್ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, 2023ರಲ್ಲಿ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯು ಹೊರಡಿಸಿದ ಆದೇಶದ ಪ್ರಕಾರ, ಸರ್ಕಾರಿ ಶಾಲೆಗಳಿಗೆ ಯಾವುದೇ ವ್ಯಕ್ತಿ ಅಥವಾ ಸಂಘ-ಸಂಸ್ಥೆಗಳು ದಾನವಾಗಿ ನೀಡುವ ವಸ್ತುಗಳನ್ನು ಶಾಲೆಯ ಮುಖ್ಯ ಶಿಕ್ಷಕರೇ ನೇರವಾಗಿ ವಿದ್ಯಾರ್ಥಿಗಳಿಗೆ ವಿತರಿಸಬೇಕು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ. ಈ ಸಂದರ್ಭದಲ್ಲಿ ಮಕ್ಕಳ ಪೋಷಕರನ್ನು ಕರೆಸಿ ಸಭೆ ಅಥವಾ ಕಾರ್ಯಕ್ರಮ ನಡೆಸುವುದು ನಿಯಮಬಾಹಿರವಾಗಿದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ನಡೆದ ಕೆಲವು ಕಾರ್ಯಕ್ರಮಗಳಲ್ಲಿ ಮಕ್ಕಳ ಹಾಗೂ ಪೋಷಕರನ್ನು ಕರೆಸಿ ಸಭೆ ನಡೆಸಿರುವ ಕುರಿತು ಉಲ್ಲೇಖಿಸಿದ ಅವರು, ಸರ್ಕಾರಿ ಶಾಲೆಗಳಲ್ಲಿ ಸಭೆ-ಸಮಾರಂಭಗಳನ್ನು ನಡೆಸಿ ಸರ್ಕಾರ ಅಥವಾ ಜನಪ್ರತಿನಿಧಿಗಳ ಕುರಿತು ರಾಜಕೀಯ ಭಾಷಣ ಮಾಡುವುದು ಸರಿಯಲ್ಲ. ...