ಕೇಂದ್ರ ಸರ್ಕಾರದಿಂದ ಮತ್ತೊಂದು ಶಾಕ್ 14 ವರ್ಷಗಳ ಬಳಿಕ ಪಾಸ್ಪೋರ್ಟ್ ಶುಲ್ಕ ಏರಿಕೆ: ಜುಲೈ 1ರಿಂದ ಹೊಸ ದರ ಜಾರಿ,
ಕೇಂದ್ರ ಸರ್ಕಾರದಿಂದ ಮತ್ತೊಂದು ಶಾಕ್ 14 ವರ್ಷಗಳ ಬಳಿಕ ಪಾಸ್ಪೋರ್ಟ್ ಶುಲ್ಕ ಏರಿಕೆ: ಜುಲೈ 1ರಿಂದ ಹೊಸ ದರ ಜಾರಿ,
ನವದೆಹಲಿ: ಕೇಂದ್ರ ಸರ್ಕಾರವು ಸುಮಾರು 14 ವರ್ಷಗಳ ಬಳಿಕ ಪಾಸ್ಪೋರ್ಟ್ ಶುಲ್ಕವನ್ನು ಹೆಚ್ಚಳ ಮಾಡಿದ್ದು, ಹೊಸ ದರಗಳು 2026ರ ಜುಲೈ 1ರಿಂದ ಜಾರಿಗೆ ಬರಲಿವೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೊರಡಿಸಿರುವ ಪಾಸ್ಪೋರ್ಟ್ಗಳು (ತಿದ್ದುಪಡಿ) ನಿಯಮಗಳು-2026 ಅಧಿಸೂಚನೆಯ ಮೂಲಕ ಈ ಬದಲಾವಣೆ ಜಾರಿಗೆ ಬಂದಿದೆ.
ಹೊಸ ನಿಯಮದ ಪ್ರಕಾರ ಸಾಮಾನ್ಯ ಹಾಗೂ ತತ್ಕಾಲ್ ಪಾಸ್ಪೋರ್ಟ್ ಸೇವೆಗಳ ಶುಲ್ಕದಲ್ಲಿ ಗಣನೀಯ ಏರಿಕೆ ಮಾಡಲಾಗಿದೆ. 36 ಪುಟಗಳ ಸಾಮಾನ್ಯ ವಯಸ್ಕರ ಪಾಸ್ಪೋರ್ಟ್ ಶುಲ್ಕ ₹1,500ರಿಂದ ₹2,500ಕ್ಕೆ ಏರಿಕೆಯಾಗಿದ್ದು, 60 ಪುಟಗಳ ಪಾಸ್ಪೋರ್ಟ್ ಶುಲ್ಕ ₹2,000ರಿಂದ ₹3,500ಕ್ಕೆ ಹೆಚ್ಚಳವಾಗಿದೆ.
ತತ್ಕಾಲ್ ಸೇವೆಗಳಲ್ಲಿಯೂ ಶುಲ್ಕ ಏರಿಕೆಯಾಗಿದ್ದು, 36 ಪುಟಗಳ ಪಾಸ್ಪೋರ್ಟ್ಗೆ ₹5,000 ಹಾಗೂ 60 ಪುಟಗಳ ಪಾಸ್ಪೋರ್ಟ್ಗೆ ₹6,000 ಶುಲ್ಕ ನಿಗದಿಯಾಗಿದೆ. ಕಳೆದುಹೋದ ಅಥವಾ ಹಾಳಾದ ಪಾಸ್ಪೋರ್ಟ್ಗಳ ಮರುಪಡೆಯುವಿಕೆ (Replacement) ಹಾಗೂ ಮಕ್ಕಳ ಪಾಸ್ಪೋರ್ಟ್ಗಳ ಶುಲ್ಕದಲ್ಲಿಯೂ ಹೆಚ್ಚಳ ಮಾಡಲಾಗಿದೆ.
ಇದೇ ವೇಳೆ, ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (PCC) ಹಾಗೂ ಸರೆಂಡರ್ ಸರ್ಟಿಫಿಕೇಟ್ಗಳಿಗೆ ₹750 ಶುಲ್ಕ ನಿಗದಿಪಡಿಸಲಾಗಿದ್ದು, ಸರ್ಟಿಫಿಕೇಟ್ ಆಫ್ ಐಡೆಂಟಿಟಿಗೆ ₹1,000 ಶುಲ್ಕ ವಿಧಿಸಲಾಗುತ್ತದೆ. ಇ-ಪಾಸ್ಪೋರ್ಟ್ ಸೇವೆಗಳಿಗೆ ಇದೇ ಶುಲ್ಕ ಅನ್ವಯವಾಗಲಿದ್ದು, ದೇಶದ ಹಲವು ಪ್ರಮುಖ ನಗರಗಳಲ್ಲಿ ಈಗಾಗಲೇ ಈ ಸೇವೆ ಲಭ್ಯವಿದೆ.
ಪಾಸ್ಪೋರ್ಟ್ ಪಡೆಯಲು ಅಥವಾ ನವೀಕರಿಸಿಕೊಳ್ಳಲು ಯೋಜಿಸಿರುವವರು ಜೂನ್ 30ರೊಳಗೆ ಅರ್ಜಿ ಸಲ್ಲಿಸಿದರೆ ಹೊಸ ದರಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ. ಜುಲೈ 1ರಿಂದ ಹೊಸ ಶುಲ್ಕ ಕಡ್ಡಾಯವಾಗಿ ಅನ್ವಯವಾಗಲಿದೆ.
ಸಾರ್ವಜನಿಕರಿಗೆ ಸಲಹೆ: ಪಾಸ್ಪೋರ್ಟ್ ನವೀಕರಣ ಅಥವಾ ಹೊಸ ಪಾಸ್ಪೋರ್ಟ್ ಅಗತ್ಯವಿದ್ದರೆ, ಹೆಚ್ಚಿದ ಶುಲ್ಕದ ಹೊರೆ ತಪ್ಪಿಸಲು ಜೂನ್ 30ರೊಳಗೆ ಅರ್ಜಿ ಸಲ್ಲಿಸುವುದು ಒಳಿತು.
🖋️ ಅಬ್ದುಲ್ ರಹಿಮಾನ್ ಸಣ್ಣಕೇರೆ
ವಾರ್ತಾ ಸಾರಥಿ ಡಿಜಿಟಲ್ ನ್ಯೂಸ್



Comments
Post a Comment