ಕೊಪ್ಪ: ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ; ಪಕ್ಷ ಸಂಘಟನೆ ಬಲವರ್ಧನೆಗೆ ಕರೆ,


ಕೊಪ್ಪ: ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ; ಪಕ್ಷ ಸಂಘಟನೆ ಬಲವರ್ಧನೆಗೆ ಕರೆ,


ಕೊಪ್ಪ, ಜೂನ್ 8: ಕೊಪ್ಪ ಪಟ್ಟಣದ ಬಾಲಗಡಿ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಜನಜಂಗುಳಿಯ ನಡುವೆ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ಪಕ್ಷದ ಸಂಘಟನೆ ಬಲವರ್ಧನೆ, ಜನಪರ ಆಡಳಿತ, ರಾಜ್ಯ ಹಾಗೂ ಕೇಂದ್ರ ರಾಜಕೀಯ ಬೆಳವಣಿಗೆಗಳು ಮತ್ತು ಮತದಾರರ ಹಕ್ಕುಗಳ ಕುರಿತು ವಿವಿಧ ಮುಖಂಡರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ 👈

ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಕುಕ್ಕುಡಿಗೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಅಂಶುಮಂತ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ, ಆದಿಲ್, ಸದಾಶಿವ, ಬಿ.ಸಿ. ಗೀತಾ, ಎಚ್.ಎಂ. ಶತೀಶ್, ಅಸಗೋಡು ನಾಗೇಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.




ಸಭೆಯ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಸೂರಜ್ ಹೆಗ್ಡೆ ಅವರ ಸ್ಮರಣಾರ್ಥ ಮೌನಾಚರಣೆ ನಡೆಸಿ ಸಂತಾಪ ಸೂಚಿಸಲಾಯಿತು. ಬಳಿಕ ಓಣಿ ತೋಟ ರತ್ನಾಕರ್ ಸ್ವಾಗತ ಭಾಷಣ ಮಾಡಿದರು.

ಯುವಕರಿಗೆ ಹೆಚ್ಚಿನ ಅವಕಾಶ ನೀಡಬೇಕು: ಡಾ. ಅಂಶುಮಂತ್,

ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಅಂಶುಮಂತ್, ಕಾಂಗ್ರೆಸ್ ಪಕ್ಷದ ಶಕ್ತಿ ಕಾರ್ಯಕರ್ತರ ನಿರಂತರ ಪರಿಶ್ರಮದಲ್ಲಿದೆ ಎಂದು ಹೇಳಿ, ಯುವಕರಿಗೆ ಹೆಚ್ಚಿನ ಅವಕಾಶ ಮತ್ತು ಪ್ರೋತ್ಸಾಹ ನೀಡಬೇಕೆಂದು ಒತ್ತಾಯಿಸಿದರು. ಸರ್ಕಾರಿ ವ್ಯವಸ್ಥೆಯಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶ ನೀಡಬಾರದು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.


ಮಹಿಳಾ ಸಬಲೀಕರಣಕ್ಕೆ ಒತ್ತು

ಬಿ.ಸಿ. ಗೀತಾ ಅವರು ಮಹಿಳೆಯರ ಸಬಲೀಕರಣ ಮತ್ತು ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯ ಅಗತ್ಯವನ್ನು ವಿವರಿಸಿದರು.



ಪಕ್ಷ ಬಲಪಡಿಸಲು ಒಗ್ಗಟ್ಟಿನ ಕೆಲಸ ಅಗತ್ಯ,


ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಅವರು ರಾಜ್ಯ ಮತ್ತು ರಾಷ್ಟ್ರ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿ, ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಕರೆ ನೀಡಿದರು.


ಬೆಲೆ ಏರಿಕೆ ವಿರುದ್ಧ ಟೀಕೆ

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ 👈


ಸಭೆಯಲ್ಲಿ ಮಾತನಾಡಿದ ಇತರ ಮುಖಂಡರು ಕೇಂದ್ರ ಸರ್ಕಾರದ ನೀತಿಗಳು, ಬೆಲೆ ಏರಿಕೆ, ಪೆಟ್ರೋಲ್ ಹಾಗೂ ಅಡುಗೆ ಅನಿಲದ ದರ ಏರಿಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಟೀಕಿಸಿದರು. ಜನಸಾಮಾನ್ಯರ ಸಮಸ್ಯೆಗಳ ಪರ ಕಾಂಗ್ರೆಸ್ ಹೋರಾಟ ಮುಂದುವರಿಸಲಿದೆ ಎಂದು ಹೇಳಿದರು.

ಪಕ್ಷ ವಿರೋಧಿ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ


ಸಭೆಯಲ್ಲಿ ಮಾತನಾಡಿದ ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಕುಕ್ಕುಡಿಗೆ, ಪಕ್ಷದ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತರ ಭಾಗವಹಿಸುವಿಕೆ ಸಮರ್ಪಕವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಾಸಕರಿಂದ ಅನುದಾನ ಅಥವಾ ವೈಯಕ್ತಿಕ ಕೆಲಸಗಳ ಅಗತ್ಯವಿದ್ದಾಗ ಮಾತ್ರ ಕೆಲವರು ಸಂಪರ್ಕಿಸುತ್ತಾರೆ ಎಂದು ಆರೋಪಿಸಿದರು.


ಪಕ್ಷದೊಳಗಿನ ಬೆಳವಣಿಗೆಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ, ನಿಷ್ಠಾವಂತ ಹಾಗೂ ದುಡಿಯುವ ಕಾರ್ಯಕರ್ತರಿಗೆ ಸೂಕ್ತ ಅವಕಾಶ ಕಲ್ಪಿಸಬೇಕು ಎಂದು ಪಕ್ಷದ ನಾಯಕರಿಗೆ ಮನವಿ ಮಾಡಿದರು.


ಸಂಕಷ್ಟದ ಸಮಯದಲ್ಲಿ ಪಕ್ಷ ಮತ್ತು ಶಾಸಕರೊಂದಿಗೆ ನಿಲ್ಲದೆ, ಹಿಂಬಾಗಿಲಿನಿಂದ ಬಿಜೆಪಿ ಜೊತೆ ಕೈಜೋಡಿಸಿ ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, “ಶಾಸಕರು ಕಷ್ಟದಲ್ಲಿದ್ದಾಗ ಕಾಣಿಸಿಕೊಳ್ಳದವರು, ಕಾರ್ಯಕ್ರಮಗಳಿಗೆ ಬಂದಾಗ ಮಾತ್ರ ಮುಖ ತೋರಿಸುವುದು ಪಕ್ಷದ ಹಿತಾಸಕ್ತಿಗೆ ಧಕ್ಕೆ ತರುತ್ತದೆ. ಇಂತಹ ದ್ವಂದ್ವ ನಿಲುವಿನ ನಾಯಕರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸುವವರಿಗೆ ಪಕ್ಷದಲ್ಲಿ ಸ್ಥಾನ ಇರಬಾರದು” ಎಂದು ಆಗ್ರಹಿಸಿದರು.


ಮತದಾರರ ಪಟ್ಟಿಯ ಕುರಿತು ಜಾಗೃತಿ,


ಸಭೆಯಲ್ಲಿ ಮಾತನಾಡಿದ ಸುಧೀರ್ ಕುಮಾರ್ ಮೂರೊಳ್ಳಿ, ಮತದಾರರ ಹಕ್ಕುಗಳ ರಕ್ಷಣೆ ಕುರಿತು ಮಹತ್ವದ ಸಂದೇಶ ನೀಡಿದರು. ಮತದಾರರ ಪಟ್ಟಿಯ ವಿಶೇಷ ಪರಿಶೀಲನೆ (SIR) ಪ್ರಕ್ರಿಯೆಯಿಂದ ಕೆಲ ಮತದಾರರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ, ಪ್ರತಿಯೊಬ್ಬ ಮತದಾರರೂ ತಮ್ಮ ಹೆಸರು, ವಿವರಗಳು ಹಾಗೂ ದಾಖಲೆಗಳ ಕುರಿತು ತಮ್ಮ ಪ್ರದೇಶದ ಬಿಎಲ್‌ಒ (Booth Level Officer) ಅವರೊಂದಿಗೆ ಸಂಪರ್ಕಿಸಿ ಸರಿಯಾದ ಮಾಹಿತಿ ಪಡೆಯಬೇಕು ಎಂದು ಮನವಿ ಮಾಡಿದರು.


ಮತ ಎಣಿಕೆ ಕುರಿತು ಸ್ಪಷ್ಟನೆ,


ಇತ್ತೀಚಿನ ಮತ ಎಣಿಕೆ ಪ್ರಕ್ರಿಯೆ ಕುರಿತು ಮಾತನಾಡಿದ ಸುಧೀರ್ ಕುಮಾರ್, 2023ರ ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಸಂಪೂರ್ಣ ಪಾರದರ್ಶಕವಾಗಿ ನಡೆದಿದ್ದು, ಬಿಜೆಪಿ ಏಜೆಂಟರ ಸಮ್ಮುಖದಲ್ಲಿಯೇ ಪ್ರಕ್ರಿಯೆ ಪೂರ್ಣಗೊಂಡಿತ್ತು ಎಂದು ಹೇಳಿದರು.


“ಮತ ಎಣಿಕೆಯಲ್ಲಿ ಯಾವುದೇ ಲೋಪದೋಷ ನಡೆದಿಲ್ಲ. ಆದರೆ ನಂತರ ಇಬ್ಬರು ಮತ ಕಳ್ಳರು ನಡೆಸಿದ ಕುತಂತ್ರ ಮತ್ತು ವಂಚನೆಯಿಂದ ಫಲಿತಾಂಶದಲ್ಲಿ ವ್ಯತ್ಯಾಸ ಉಂಟಾಗಿದೆ. ಈ ಕುರಿತು ಕಾಂಗ್ರೆಸ್ ಪಕ್ಷ ಕಾನೂನು ಹೋರಾಟ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಕೆಲಸ ಮಾಡಲಿದೆ” ಎಂದು ಹೇಳಿದರು.


ರಾಜಕೀಯ ಬೆಳವಣಿಗೆಗಳ ಕುರಿತು ವಿಶ್ಲೇಷಣೆ,

ಹಿರಿಯ ಪತ್ರಕರ್ತ ವಿಶ್ವನಾಥ ಶೆಟ್ಟಿ ಅವರು ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಕುರಿತು ವಿಶ್ಲೇಷಣಾತ್ಮಕವಾಗಿ ಮಾತನಾಡಿ, ರಾಜ್ಯ ಹಾಗೂ ರಾಷ್ಟ್ರೀಯ ರಾಜಕೀಯದ ಇತ್ತೀಚಿನ ಬೆಳವಣಿಗೆಗಳನ್ನು ವಿವರಿಸಿದರು.



ಸಭೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಪಕ್ಷ ಸಂಘಟನೆ ಬಲಪಡಿಸುವುದು, ನಿಷ್ಠಾವಂತ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು ಹಾಗೂ ಮುಂಬರುವ ಚುನಾವಣೆಗೆ ಸಜ್ಜಾಗುವ ಕುರಿತು ಚರ್ಚೆ ನಡೆಯಿತು.



🖋️ ಅಬ್ದುಲ್ ರಹಿಮಾನ್ ಸಣ್ಣಕೇರೆ,





Comments

Popular posts from this blog

ಕೊಪ್ಪ:- ಪ್ರತಿಭೆಗೆ ಪ್ರೋತ್ಸಾಹ: ಕೊಪ್ಪದಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನ, ವಿದ್ಯಾರ್ಥಿಗಳ ಸಾಧನೆಗೆ ಕೊಪ್ಪದಲ್ಲಿ ಭರ್ಜರಿ ಗೌರವ,