ಸರ್ಕಾರಿ ಶಾಲೆಗಳಲ್ಲಿ ಸಭೆ ನಡೆಸಿ ವಸ್ತು ವಿತರಣೆ ಮಾಡುವುದು ಸರ್ಕಾರದ ಆದೇಶಕ್ಕೆ ವಿರುದ್ಧ: ಓಣಿತೋಟ ರತ್ನಾಕರ್


 ಸರ್ಕಾರಿ ಶಾಲೆಗಳಲ್ಲಿ ಸಭೆ ನಡೆಸಿ ವಸ್ತು ವಿತರಣೆ ಮಾಡುವುದು ಸರ್ಕಾರದ ಆದೇಶಕ್ಕೆ ವಿರುದ್ಧ: ಓಣಿತೋಟ ರತ್ನಾಕರ್



ಕೊಪ್ಪ, ಜು. 31: ಸರ್ಕಾರಿ ಶಾಲೆಗಳ ಮಕ್ಕಳಿಗೆ ಪುಸ್ತಕಗಳು, ಬಟ್ಟೆ ಹಾಗೂ ಇತರೆ ಅಗತ್ಯ ವಸ್ತುಗಳನ್ನು ದಾನವಾಗಿ ನೀಡುವುದು ಉತ್ತಮ ಸಂಸ್ಕೃತಿಯಾಗಿದ್ದು, ಅದನ್ನು ಯಾರೂ ವಿರೋಧಿಸುವುದಿಲ್ಲ. ಆದರೆ, ಮತಗಳ ಉದ್ದೇಶದಿಂದ ಮಕ್ಕಳ ಪೋಷಕರನ್ನು ಶಾಲೆಗೆ ಕರೆಸಿ ಸಭೆ-ಸಮಾರಂಭಗಳನ್ನು ಆಯೋಜಿಸಿ ವಸ್ತುಗಳನ್ನು ವಿತರಿಸುವುದು ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಮುಖಂಡ ಓಣಿತೋಟ ರತ್ನಾಕರ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, 2023ರಲ್ಲಿ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯು ಹೊರಡಿಸಿದ ಆದೇಶದ ಪ್ರಕಾರ, ಸರ್ಕಾರಿ ಶಾಲೆಗಳಿಗೆ ಯಾವುದೇ ವ್ಯಕ್ತಿ ಅಥವಾ ಸಂಘ-ಸಂಸ್ಥೆಗಳು ದಾನವಾಗಿ ನೀಡುವ ವಸ್ತುಗಳನ್ನು ಶಾಲೆಯ ಮುಖ್ಯ ಶಿಕ್ಷಕರೇ ನೇರವಾಗಿ ವಿದ್ಯಾರ್ಥಿಗಳಿಗೆ ವಿತರಿಸಬೇಕು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ. ಈ ಸಂದರ್ಭದಲ್ಲಿ ಮಕ್ಕಳ ಪೋಷಕರನ್ನು ಕರೆಸಿ ಸಭೆ ಅಥವಾ ಕಾರ್ಯಕ್ರಮ ನಡೆಸುವುದು ನಿಯಮಬಾಹಿರವಾಗಿದೆ ಎಂದು ಹೇಳಿದ್ದಾರೆ.



ಇತ್ತೀಚೆಗೆ ನಡೆದ ಕೆಲವು ಕಾರ್ಯಕ್ರಮಗಳಲ್ಲಿ ಮಕ್ಕಳ ಹಾಗೂ ಪೋಷಕರನ್ನು ಕರೆಸಿ ಸಭೆ ನಡೆಸಿರುವ ಕುರಿತು ಉಲ್ಲೇಖಿಸಿದ ಅವರು, ಸರ್ಕಾರಿ ಶಾಲೆಗಳಲ್ಲಿ ಸಭೆ-ಸಮಾರಂಭಗಳನ್ನು ನಡೆಸಿ ಸರ್ಕಾರ ಅಥವಾ ಜನಪ್ರತಿನಿಧಿಗಳ ಕುರಿತು ರಾಜಕೀಯ ಭಾಷಣ ಮಾಡುವುದು ಸರಿಯಲ್ಲ. ಶಾಲೆಗಳು ರಾಜಕೀಯ ಚಟುವಟಿಕೆಗಳಿಗೆ ವೇದಿಕೆಯಾಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾವು ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಎರಡು ಬಾರಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿ ಹಾಗೂ ವಿವಿಧ ಸಾರ್ವಜನಿಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಅನುಭವದ ಆಧಾರದ ಮೇಲೆ ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದು, ಸಂಬಂಧಪಟ್ಟವರು ಶಿಕ್ಷಣ ಇಲಾಖೆಯ ಸುತ್ತೋಲೆ ಮತ್ತು ಸರ್ಕಾರದ ಆದೇಶಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಬೇಕು ಎಂದು ತಿಳಿಸಿದ್ದಾರೆ.



ಶಿಕ್ಷಣ ಇಲಾಖೆಯ ಆದೇಶಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಾಲಾ ಮುಖ್ಯ ಶಿಕ್ಷಕರು ಕಡ್ಡಾಯವಾಗಿ ಪಾಲಿಸಬೇಕು. ನಿಯಮಗಳನ್ನು ಉಲ್ಲಂಘಿಸಿದರೆ ಸಂಬಂಧಪಟ್ಟ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳುವ ಅವಕಾಶವೂ ಇದೆ ಎಂದು ಓಣಿತೋಟ ರತ್ನಾಕರ್ ಎಚ್ಚರಿಸಿದ್ದಾರೆ.


🖋️ ರೆಹಮಾನ್ ಸಣ್ಣಕೇರೆ 

ವಾರ್ತಾ ಸಾರಥಿ ಡಿಜಿಟಲ್ ನ್ಯೂಸ್ 

Comments

Popular posts from this blog

ಕೊಪ್ಪ ಬಸ್ ನಿಲ್ದಾಣದ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ – ಕೆಡಿಪಿ ಸದಸ್ಯ ಮಹಮ್ಮದ್ ಸಾದಿಕ್ ಅವರ ಸಮಯೋಚಿತ ಕ್ರಮಕ್ಕೆ ಸಾರ್ವಜನಿಕರ ಮೆಚ್ಚುಗೆ,

ಆಪತ್ತಿನ ಕ್ಷಣದಲ್ಲಿ ಜೀವ ಉಳಿಸಿದ ಕೊಪ್ಪ ಅಗ್ನಿಶಾಮಕ ದಳ – ಸಮಯಪ್ರಜ್ಞೆಯ ಕಾರ್ಯಾಚರಣೆಗೆ ಸಾರ್ವಜನಿಕರ ಮೆಚ್ಚು

ಕೊಪ್ಪ,ಅಕ್ರಮವಾಗಿ ಜಾನುವಾರು ಸಾಗಾಟ ಆರೋಪ: ಇಬ್ಬರ ವಶ, ವಾಹನ ಜಪ್ತಿ,