ಶಾಲೆಯಲ್ಲಿ ರಾಜಕೀಯ ಬೇಡ ಎಂದೇ ಹೇಳಿದ್ದೆ, ದಾನಕ್ಕೆ ವಿರೋಧ ವ್ಯಕ್ತಪಡಿಸಿಲ್ಲ: ಓಣಿತೋಟ ರತ್ನಾಕರ್ ಸ್ಪಷ್ಟನೆ,
ಶಾಲೆಯಲ್ಲಿ ರಾಜಕೀಯ ಬೇಡ ಎಂದೇ ಹೇಳಿದ್ದೆ, ದಾನಕ್ಕೆ ವಿರೋಧ ವ್ಯಕ್ತಪಡಿಸಿಲ್ಲ: ಓಣಿತೋಟ ರತ್ನಾಕರ್ ಸ್ಪಷ್ಟನೆ,
ಕೊಪ್ಪ, ಆ. 5: ಸರ್ಕಾರಿ ಶಾಲೆಯ ಮಕ್ಕಳಿಗೆ ಬಟ್ಟೆ ಹಾಗೂ ಇತರೆ ವಸ್ತುಗಳ ವಿತರಣೆ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳಿಗೆ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಓಣಿತೋಟ ರತ್ನಾಕರ್ ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರು ಹಾಗೂ ಡಿಸಿಸಿ ಬ್ಯಾಂಕ್ ಸದಸ್ಯರಾಗಿರುವ ಹಿರಿಯ ಮುಖಂಡ ರಾಮಸ್ವಾಮಿ ಅವರು ತಮ್ಮ ವಿರುದ್ಧ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ರತ್ನಾಕರ್ ತಿಳಿಸಿದ್ದಾರೆ.
"ದಾನ ಮಾಡುವುದು ತಪ್ಪಲ್ಲ. ಸಮಾಜಮುಖಿ ಕಾರ್ಯಗಳನ್ನು ನಾನು ಸದಾ ಸ್ವಾಗತಿಸುತ್ತೇನೆ. ವಿಶ್ವನಾಥ ಗದ್ದೆಮನೆ ಅವರು ತಮ್ಮ ಸ್ವಂತ ದುಡಿಮೆಯಿಂದ ಶಾಲಾ ಮಕ್ಕಳಿಗೆ ಸಹಾಯ ಮಾಡುತ್ತಿದ್ದರೆ ಅದನ್ನು ನಾನು ಬೆಂಬಲಿಸುತ್ತೇನೆ. ಆದರೆ ಸರ್ಕಾರಿ ಶಾಲೆಯಲ್ಲಿ ರಾಜಕೀಯ ಭಾಷಣಗಳನ್ನು ಮಾಡುವುದು, ಜನಪ್ರತಿನಿಧಿಗಳ ಹೆಸರನ್ನು ಬಳಸಿಕೊಂಡು ಸರ್ಕಾರವನ್ನು ಟೀಕಿಸುವುದು ಸರಿಯಲ್ಲ ಎಂಬುದನ್ನಷ್ಟೇ ಹೇಳಿದ್ದೇನೆ. ದಾನಕ್ಕೆ ನಾನು ಯಾವುದೇ ಸಂದರ್ಭದಲ್ಲೂ ವಿರೋಧ ವ್ಯಕ್ತಪಡಿಸಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಮ್ಮ ವಿರುದ್ಧ ಎರಡು ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದೆ ಎಂಬ ಆರೋಪವನ್ನು ತಳ್ಳಿಹಾಕಿದ ರತ್ನಾಕರ್, "ಆ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ರಾಮಸ್ವಾಮಿ ಅವರು ಗಬ್ಬಾನೆ ದೇವಸ್ಥಾನಕ್ಕೆ ಬರಲಿ, ವೀರಭದ್ರ ದೇವಸ್ಥಾನಕ್ಕೆ ಬರಲಿ, ಅಥವಾ ಅವರು ನಿರ್ವಹಿಸುವ ಬಂಬ್ಲಪುರ ದೇವಸ್ಥಾನಕ್ಕೆ ಬರಲಿ; ದೇವರ ಮುಂದೆ ಈ ವಿಚಾರವನ್ನು ಸ್ಪಷ್ಟಪಡಿಸಲು ನಾನು ಸಿದ್ಧನಿದ್ದೇನೆ" ಎಂದು ಸವಾಲು ಹಾಕಿದರು.
ತಾವು ಕಾಂಗ್ರೆಸ್ ಪಕ್ಷದಲ್ಲಿ ಹಲವು ವರ್ಷಗಳಿಂದ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದ ರತ್ನಾಕರ್, "ನಾನು ಸುಮಾರು 45 ವರ್ಷಗಳಿಂದ ಒಂದೇ ಪಕ್ಷದಲ್ಲಿದ್ದೇನೆ. ಪಕ್ಷ ಅಧಿಕಾರದಲ್ಲಿರಲಿ ಅಥವಾ ವಿರೋಧ ಪಕ್ಷದಲ್ಲಿರಲಿ, ನಿಷ್ಠೆಯಿಂದ ಕೆಲಸ ಮಾಡಿದ್ದೇನೆ" ಎಂದರು.
ಇದೇ ವೇಳೆ ರಾಮಸ್ವಾಮಿ ಅವರ ರಾಜಕೀಯ ನಡೆ ಕುರಿತು ಪ್ರಶ್ನೆ ಎತ್ತಿದ ಅವರು, "ನನ್ನ ಆದಾಯದ ಬಗ್ಗೆ ಪ್ರಶ್ನಿಸುವ ಬದಲು, ನಿಮ್ಮ ಅಧಿಕಾರದ ಅವಧಿಯಲ್ಲಿ ಸಮಾಜ ಸೇವೆಗಾಗಿ ಎಷ್ಟು ದಾನ ಮಾಡಿದ್ದೀರಿ ಎಂಬುದನ್ನು ಜನರ ಮುಂದೆ ಹೇಳಬೇಕು" ಎಂದು ತಿರುಗೇಟು ನೀಡಿದರು.
"ನಾನು ಯಾವುದೇ ಕಾರಣಕ್ಕೂ ದಾನ ಕಾರ್ಯವನ್ನು ತಪ್ಪು ಎಂದು ಹೇಳಿಲ್ಲ. ಸರ್ಕಾರಿ ಶಾಲೆಗಳಲ್ಲಿ ರಾಜಕೀಯ ನಡೆಯಬಾರದು ಎಂಬುದನ್ನಷ್ಟೇ ಹೇಳಿದ್ದೇನೆ" ಎಂದು ರತ್ನಾಕರ್ ಮತ್ತೊಮ್ಮೆ ಸ್ಪಷ್ಟಪಡಿಸಿದರು.



Comments
Post a Comment