ಕೊಪ್ಪ ಪೌರ ಗಣೇಶೋತ್ಸವಕ್ಕೆ 52ರ ಸಂಭ್ರಮ: ಭಕ್ತಿ, ಕಲೆ, ಸಂಸ್ಕೃತಿಯ ವೈಭವಕ್ಕೆ ಸಜ್ಜಾದ ಕೊಪ್ಪ ಪಟ್ಟಣ,
ಕೊಪ್ಪ: ಕೊಪ್ಪದ ಪೌರ ಗಣೇಶೋತ್ಸವ ಸಮಿತಿ ವತಿಯಿಂದ 52ನೇ ವರ್ಷದ ಗಣೇಶೋತ್ಸವವನ್ನು ಸೆಪ್ಟೆಂಬರ್ 14ರಿಂದ 24ರವರೆಗೆ ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆದಿದೆ.
ಜೆ.ಎಂ.ಜೆ. ಟಾಕೀಸ್ ಪಕ್ಕದಲ್ಲಿರುವ ‘ಶ್ರೀ ವಿನಾಯಕ ಮಂಟಪ’ದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸೆ.16ರಂದು ಪ್ರಾಥಮಿಕ, ಸೆ.17ರಂದು ಪ್ರೌಢಶಾಲೆ ಹಾಗೂ ಸೆ.20ರಂದು ಕಾಲೇಜು ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ₹10,000, ದ್ವಿತೀಯ ₹5,000 ಹಾಗೂ ತೃತೀಯ ₹3,000 ನಗದು ಬಹುಮಾನ ನೀಡಲಾಗುವುದು.
ಸೆ.20ರಂದು ನಡೆಯುವ ಜಿಲ್ಲಾ ಮಟ್ಟದ ಜಾನಪದ ಸ್ಪರ್ಧೆಯಲ್ಲಿ ಪ್ರಥಮ ₹15,000, ದ್ವಿತೀಯ ₹10,000 ಹಾಗೂ ತೃತೀಯ ₹5,000 ಬಹುಮಾನ ನೀಡಲಾಗುತ್ತದೆ.
ಇದರೊಂದಿಗೆ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ, ಧಾರ್ಮಿಕ ರಸಪ್ರಶ್ನೆ ಹಾಗೂ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ. ಪ್ರತಿದಿನ ಸಂಜೆ 7 ಗಂಟೆಗೆ ಸಂಗೀತ ರಸಮಂಜರಿ, ನೃತ್ಯ ವೈಭವ, ನಗೆ ನಾಟಕ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ.
ಸೆ.14ರಂದು ಗಣೇಶನ ಪ್ರತಿಷ್ಠಾಪನೆ, ಸೆ.20ರಂದು ಮಹಾಗಣಪತಿ ಹೋಮ, ಮಹಾಪೂಜೆ ಹಾಗೂ ದೀಪೋತ್ಸವ, ಸೆ.23ರಂದು ಸತ್ಯನಾರಾಯಣ ವ್ರತ ಮತ್ತು ಅನ್ನಸಂತರ್ಪಣೆ ನಡೆಯಲಿದ್ದು, ಸೆ.24ರಂದು ಅದ್ದೂರಿ ವಿಸರ್ಜನಾ ಮಹೋತ್ಸವ ನಡೆಯಲಿದೆ.
52 ವರ್ಷಗಳ ಪರಂಪರೆಯ ಗಣೇಶೋತ್ಸವಕ್ಕೆ ಈ ಬಾರಿ ಮತ್ತಷ್ಟು ಮೆರುಗು ನೀಡಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸುವಂತೆ ಸಮಿತಿ ಮನವಿ ಮಾಡಿದೆ.
🖋️ ರೆಹಮಾನ್ ಸಣ್ಣಕೇರೆ
ವಾರ್ತಾ ಸಾರಥಿ ಡಿಜಿಟಲ್ ನ್ಯೂಸ್




Comments
Post a Comment